ಇಪ್ಪೆಮರ-
ಸಪೋಟೇಸಿ ಜಾತಿಗೆ ಸೇರಿದ ಮರ (ಬ್ಯಾಸ್ಸಿಯಾ ಸಿನ್. ಮಧೂಕಾ). ಉಷ್ಣವಲಯದ ಕಾಡುಗಳಲ್ಲೂ ದಖನ್ ಪ್ರಸ್ಥಭೂಮಿಯ ಕಾಡುಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಎತ್ತರ 30'-60'ವರೆಗೆ ವರ್ಷದ ಕೆಲವು ತಿಂಗಳಲ್ಲಿ ಎಲೆ ಉದುರುತ್ತದೆ. ಇದರ ಮೂಲಕಾಂಡ ದಪ್ಪ ಮತ್ತು ಚಿಕ್ಕದು; ಮೇಲ್ಭಾಗದಲ್ಲಿ ಹೆಚ್ಚು ಕವಲೊಡೆದು ಬೆಳೆಯುವುದು. ಎಲೆಗಳು ಸರಳ, ಪರ್ಯಾಯಕ್ರಮದಲ್ಲಿ ಅಥವಾ ಗುಂಪಾಗಿ ಗಿಣ್ಣುಗಳ ಮೇಲೆ ಜೋಡಿಸಿ ಕೊಂಡಿರುತ್ತವೆ. ಹೂ ಬಿಡುವುದು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ. ಗುಂಪಾಗಿರುವ ಹೂಗೊಂಚಲುಗಳಲ್ಲಿ ಹೂಗಳಿರುವುವು. ಪ್ರತಿ ಹೂವಿಗೂ ತೊಟ್ಟು ಇದೆ. ಹೂ ಉಚ್ಚ ಅಂಡಾಶಯದ ದ್ವಿಲಿಂಗ ಜಾತಿಗೆ ಸೇರಿದೆ. ಪುಷ್ಪಪಾತ್ರದ ಸಂಖ್ಯೆ 4 ಅಥವಾ 5. ದಳಗಳು ಬೆಳ್ಳಗೆ: 8-10 ಸಂಖ್ಯೆಯಲ್ಲಿ ಸಂಯುಕ್ತವಾಗಿರುತ್ತವೆ. ಕೇಸರಗಳ ಸಂಖ್ಯೆ ದಳಗಳ ಸಂಖ್ಯೆಗಿಂತ 2 ಅಥವಾ 3ರಷ್ಟು. ಇವು ದಳಗಳಿಗೆ ಅಂಟಿಕೊಂಡಿರುತ್ತವೆ. ಸಂಯುಕ್ತ ಕಾಂಡಾಶಯದಲ್ಲಿ 8-10 ಕಾರ್ಪೆಲುಗಳಿವೆ. ಹೂಗಳು ಅನ್ಯಪರಾಗಸ್ಪರ್ಶಕ್ಕೆ ಹೊಂದಿಕೊಂಡಿವೆ. ಈ ವೃಕ್ಷ ಜೂನ್ ಅಥವಾ ಆಗಸ್ಟ್ ತಿಂಗಳುಗಳಲ್ಲಿ ಹಣ್ಣು ಬಿಡುವುದು. ಪ್ರತಿಯೊಂದು ಕಾರ್ಪೆಲಿಗೂ ಒಂದು ಬೀಜವಿದೆ. ಈ ಹಣ್ಣು ಬೆರ್ರಿ ಜಾತಿಗೆ ಸೇರಿದುದು. ಹೂಗಳಲ್ಲಿ ಒಂದು ಬಗೆಯ ಮಧು ಇದೆ. ಯೀಸ್ಟ್ ಎಂಬ ಸೂಕ್ಷ್ಮ ಸಸ್ಯಗಳು ಮಧುವನ್ನು ಮಾದಕದ್ರವ್ಯವನ್ನಾಗಿ ಮಾಡುವುವು. ಹೂಗಳಲ್ಲಿರುವ ಮಧುವನ್ನು ಶೇಖರಿಸಿ ಮೂಲವ್ಯಾಧಿ (ಪೈಲ್ಸ್) ಮುಂತಾದುವುಗಳಲ್ಲಿ ಔಷಧಿಯಾಗಿ ಉಪಯೋಗಿಸುವುದಿದೆ. ಬೀಜಗಳಿಂದ ಎಣ್ಣೆ ತೆಗೆದು ದೀಪಕ್ಕೂ ಸೋಪ್, ವನಸ್ಪತಿ ತುಪ್ಪ, ಗ್ಲಿಸರೀನ್ ಮುಂತಾದುವುಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಮರದ ತೊಗಟೆಗೆ ಔಷಧ ಗುಣವಿದೆ. ಇದರ ಮರ ಬಹಳ ಗಟ್ಟಿ. ಬಣ್ಣ ಕೆಂಪುಮಿಶ್ರ ಬೂದು. ಮರ ಬಲು ಬಾಳಿಕೆ ಬರುವುದರಿಂದ ಇದನ್ನು ಮರಮಟ್ಟುಗಳನ್ನು ಮಾಡಲು ಉಪಯೋಗಿಸುವರು. ಮೊದಲು ಬೀಜಗಳನ್ನು ಬಿತ್ತಿ ಸಸಿಗಳನ್ನು ಬೇಕಾದಲ್ಲಿ ನೆಟ್ಟು ಇಪ್ಪೆಮರದ ಕೃಷಿ ಮಾಡುತ್ತಾರೆ.

(ಜೆ.ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ